ಹೌದಿನಿ, ಹ್ಯಾರಿ ವಿಲಿಯಂ
	1874-1926. ಪ್ರಪಂಚ ಪ್ರಸಿದ್ಧ ಜಾದುಗಾರ. 1874 ಮಾರ್ಚ್ 24ರಂದು ಹಂಗರಿಯ ಹೆರಿಜ್‍ವೈಸ್ ಬುಡಾಪೆಸ್ಟ್‍ನಲ್ಲಿ ಜನಿಸಿದ. ಇವನ ತಂದೆ ಮೇಯರ್ ಸ್ಯಾಮ್ಯುಯೆಲ್ ವೇಯ್ಸ್ ಧಾರ್ಮಿಕ ಉಪನ್ಯಾಸಗಳನ್ನು ನೀಡುತ್ತಿದ್ದ. ತನ್ನ ಸಂಸಾರವನ್ನು ಅ್ಯಪಲ್‍ಟನ್, ವಿಸ್ಕಾನ್ಸಿನ್‍ಗೆ ಬದಲಾಯಿಸಿದ. ಸಂಸಾರದ ತೊಂದರೆಯಲ್ಲಿ ಸಿಲುಕಿ ಕೊಂಡು ಒಂದೆಡೆಯಿಂದ ಮತ್ತೊಂದೆಡೆ ವಲಸೆಹೋಗುವ ಮೂಲಕ ಈತ ಹಣ ಸಂಗ್ರಹಿಸುತ್ತಿದ್ದ. ಈ ಸಮಯದಲ್ಲಿ ಹೌದಿನಿ ಎರಡು ವರ್ಷದ ಬಾಲಕ. 

	ಎಂಟು ವರ್ಷದ ಬಾಲಕನಾಗಿದ್ದಾಗ ಈತ ದಿನಪತ್ರಿಕೆ ಮಾರುತ್ತಿದ್ದ, ಪಾದರಕ್ಷೆಗಳಿಗೆ ಪಾಲಿಶ್ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಇವನಿಗೆ ಲೆಯ್ನಿ ಎಂಬಾತನ ಪರಿಚಯವಾಯಿತು. ಆತ ಜಾದು ಪ್ರದರ್ಶನ ನೀಡುತ್ತಿದ್ದ. ಅವನಿಂದ ಹೌದಿನಿ ಜಾದುಕಲೆಯನ್ನು ಕಲಿತ. ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಮನೆಬಿಟ್ಟು ಕನ್ಸಾಸ್‍ನಗರಕ್ಕೆ ಹೋದ. ಒಂದು ವರ್ಷದ ಅನಂತರ ಮತ್ತೆ ತನ್ನ ಕುಟುಂಬದವರೊಡನೆ ನ್ಯೂಯಾರ್ಕ್ ನಗರ ಸೇರಿದ. ಇಲ್ಲಿ ಸಂಸಾರ ನಿಭಾಯಿಸುವ ಸಲುವಾಗಿ ವಿವಿಧ ಚಾಕರಿಗಳನ್ನು ಮಾಡುತ್ತಿದ್ದ. ಬಿಡುವಿನ ಸಂದರ್ಭದಲ್ಲಿ ಈಜುಗಾರಿಕೆ ಯಲ್ಲಿಯೂ ಪರಿಣತಿ ಪಡೆದ. ಈತನ ನಿಜವಾದ ಹೆಸರು ಎರಿಕ್ ವೇಯ್ಸ್. ಫ್ರಾನ್ಸಿನ ಜಾದುಗಾರ ಜೀನ್ ಯೂಜಿನ್ ರಾಬಟ್, ಹೌದಿನ್ ಎಂಬಾತ ಹೌದಿನ್; ಹೆಸರನ್ನು ತನ್ನ ಪ್ರದರ್ಶನಕ್ಕೆ ಬಳಸಿದ. ತರುವಾಯ ಈ ಹೆಸರನ್ನೇ ಕಾನೂನುಬದ್ಧಗೊಳಿಸಿಕೊಂಡ. 

	ತಂದೆ ನಿಧನನಾದ ಅನಂತರ ಈತ ದಿನವಿಡೀ ಜಾದು, ಮನೋ ರಂಜನೆ ಕೆಲಸದಲ್ಲಿ ತೊಡಗಿಸಿಕೊಂಡ. ಈತನ ಮೊದಲ ಪ್ರದರ್ಶನ ಅಮ್ಯೂಸ್‍ಮೆಂಟ್ ಪಾರ್ಕಿನಲ್ಲಿ ನಡೆಯಿತು. ಅನಂತರ ಡಿಮೆ ವಸ್ತುಸಂಗ್ರಹಾಲಯ ಹಾಗೂ ಶಿಕಾಗೊ ವಲ್ರ್ಡ್ ಫೇರ್‍ನ ವಿವಿಧ ಸ್ಥಳಗಳಲ್ಲಿ ತನ್ನ ಸಹೋದರ ಥಿಯೋ ನೊಡನೆ ಪ್ರದರ್ಶನ ನೀಡಿದ(1893). ಈತ ಪ್ರಸಿದ್ಧ ನೃತ್ಯಗಾರ್ತಿ ಹಾಗೂ ಹಾಡುಗಾರ್ತಿಯಾದ ಬೆಟ್ರಿಸ್ ಬೆಸ್‍ಳನ್ನು ಭೇಟಿಮಾಡಿ, ಪ್ರೀತಿಸಿ ವಿವಾಹವಾದ(1894). ಮದುವೆಯಾದ ಅನಂತರ ಈಕೆ ಇವನ ಪ್ರದರ್ಶನದಲ್ಲಿ ಸಹಭಾಗಿಯಾದಳು. 

	ಈತ ಪ್ರದರ್ಶನದ ಸಂದರ್ಭದಲ್ಲಿ ಕೈಗೆತೊಡಿಸಿದ ಕೈಕೋಳವನ್ನು ಕ್ಷಣಾರ್ಧದಲ್ಲಿ ಕಳಚುತ್ತಿದ್ದ, ಕಣ್ಮುಚ್ಚಿಬಿಡುವಷ್ಟರಲ್ಲಿ ನೂರಾರು ಡಾಲರ್ ಹಣವನ್ನು ವ್ಯಕ್ತಿಯ ಕೈಮೇಲೆ ತೋರಿಸುತ್ತಿದ್ದ. ಕಾಲ್ಬಂದಿ, ಕೈಬಂದಿ ಹಾಗೂ ಬಂದೀಖಾನೆಯ ಕಬ್ಬಿಣದ ಸರಳುಗಳನ್ನು ಕ್ಷಣಾರ್ಧದಲ್ಲಿ ಮುರಿದು ಹೊರಬರುವ ಚಮತ್ಕಾರಗಳನ್ನು ಪ್ರದರ್ಶಿಸಿದ. ಈತ ಪ್ರಪಂಚಾದ್ಯಂತ ಪ್ರದರ್ಶನ ನೀಡಲು ಮಾರ್ಟಿನ್ ಬೆಕ್ ಎಂಬಾತ ಸಹಾಯ ಮಾಡಿದ.

	ಜಾದು ಪ್ರದರ್ಶನದಲ್ಲಿ ಜನಪ್ರಿಯತೆಗಳಿಸಿದ ಈತ ಒಮ್ಮೆ ಅಮೆರಿಕ ದಲ್ಲಿ ಸರಿಯಾದ ರೀತಿಯಲ್ಲಿ ಪ್ರದರ್ಶನ ನೀಡಲಾಗಲಿಲ್ಲ. ಅನಂತರ ಯುರೋಪ್, ರಷ್ಯದೇಶಗಳಕಡೆ ಪತ್ನಿಯೊಡನೆ ಪ್ರಯಾಣ ಬೆಳೆಸಿದ. ಐದು ವರ್ಷ ಯುರೋಪ್ ದೇಶದಲ್ಲಿ ಜಾದು ಪ್ರದರ್ಶನ ನೀಡಿ ಜನಪ್ರಿಯತೆ ಗಳಿಸಿದ. ಮತ್ತೆ ಅಮೆರಿಕಕ್ಕೆ ಹಿಂದಿರುಗಿ(1905) ಅತ್ಯುತ್ತಮ ಜಾದುಪ್ರದರ್ಶನ ನೀಡತೊಡಗಿದ. ಅತ್ಯಂತ ಕ್ಲಿಷ್ಟಕರ ಹಾಗೂ ಸಾಹಸಮಯ ಪ್ರದರ್ಶನಗಳ ಕಡೆ ಈ ಬಾರಿ ಗಮನ ನೀಡಿದ. ತನ್ನೆರಡೂ ಕೈಗಳನ್ನು ಹಗ್ಗದಿಂದ ಕಟ್ಟಿಸಿಕೊಂಡು ಒಂದ ಶವ ಪೆಟ್ಟಿಗೆಯೊಳಗೆ ಮಲಗಿ, ಆ ಪೆಟ್ಟಿಗೆಯನ್ನು ಮುಚ್ಚಿ ಅದನ್ನು ನೀರಿನ ಆಳಕ್ಕೆ ಬಿಸಾಡಲು ತಿಳಿಸುತ್ತಿದ್ದ. ಅನಂತರ ಕೆಲವೇ ಕ್ಷಣಗಳಲ್ಲಿ ಕಟ್ಟಿದ ತನ್ನೆರಡು ಕೈಗಳನ್ನು ಬಿಡಿಸಿಕೊಂಡು ನೀರಿನಿಂದ ಮೇಲೆದ್ದು ಬರುತ್ತಿದ್ದ. ಚಮತ್ಕಾರದ ಈ ಪ್ರದರ್ಶನ ಜನರನ್ನು ಅಚ್ಚರಿಪಡಿಸುತ್ತಿತ್ತು. ಇಂಥ ಪ್ರದರ್ಶನಕ್ಕೆ ಹೊಸ ಆಯಾಮ ನೀಡಿದ ಕಾರಣ ಈ ಬಗೆಯ ಪ್ರಯೋಗಗಳಿಗೆ ಹೌದಿನಿ ಎಂಬ ಹೆಸರು ಜಾದು ಕ್ಷೇತ್ರದಲ್ಲಿ ಪ್ರಸಿದ್ಧವಾಗಿ ಉಳಿದಿದೆ. ಜಾದು ಕಲೆಯ ಮೂಲಕ ಜನರಲ್ಲಿ ಮೌಢ್ಯವನ್ನು ಬಿತ್ತುತ್ತಿದ್ದ ಧಾರ್ಮಿಕ ಮುಖಂಡರ ಮೋಸವನ್ನೂ ಈತ ಬಯಲು ಮಾಡಿದ. 

	ಎರಡು ದಶಕಗಳಿಗೂ ಹೆಚ್ಚು ಕಾಲ ಪ್ರದರ್ಶನ ನೀಡಿದ ಈತ 1916-23ರವರೆಗೆ ಜಾದು ಪ್ರದರ್ಶನ ಕುಂಠಿತವಾದಾಗ ಅಧ್ಯಾತ್ಮದ ಕಡೆ ಹೊರಳಿದ. ಇವನ ಅಂತಿಮ ದಿನಗಳು ಕಷ್ಟಕರವಾಗಿದ್ದುವು. ಈತನ ಪ್ರದರ್ಶನ ವಿವಿಧ ರೀತಿಯ ಜಾದು ತಂತ್ರ, ಕೋಳಗಳಿಂದ ಬಿಡಿಸಿಕೊಳ್ಳುವಿಕೆ, ಧಾರ್ಮಿಕ ಮುಖಂಡರ ಕುತಂತ್ರ ಮುಂತಾದುವನ್ನು ಒಳಗೊಂಡಿರುತ್ತಿತ್ತು. ಈತ 1926 ಅಕ್ಟೋಬರ್ 31ರಂದು ನಿಧನನಾದ.
						

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

			(ಪಿ.ಜಿ.ಒ.)